ಏಪ್ರಿಲ್ ೧, ಹೈದರಾಬಾದ್.
ಎಲ್ಲೆಡೆ ಮೂರ್ಖರ ದಿನವಾದರೂ ನಾನು ಹಾಗು ನನ್ನ ಗೆಳೆಯ ಲೋಕೇಶ್ (M.Tech ಓದುತ್ತಿರುವ ಹುಡುಗರು) ಮಾತ್ರ ಬುದ್ಧಿವಂತಿಕೆಯ ನಿರ್ಧಾರ ಮಾಡುವುದರಲ್ಲಿ ನಿರತರಾಗಿದ್ದೆವು - ಬೇಸಿಗೆ ರಜೆಯಲ್ಲಿ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಹೋಗುವ ಯೋಚನೆ. ನಮ್ಮ ಕಾಲೇಜು, IIIT-H ಮೂರು ತಿಂಗಳ ಕಾಲ ರಜೆ ನೀಡಿದ್ದು ನಮಗೆ ವರದಾನವೇ ಆಗಿತ್ತು.
ಒಂದು ಸಾಮಾಜಿಕ ತಾಣದಲ್ಲಿ ಹಿಮಾಚಲದ ಬಗ್ಗೆ ಓದಿ ಉತ್ಸಾಹಗೊಂಡ ನಾವು ದೊಡ್ಡ ಪ್ರವಾಸಕ್ಕೆ ಹೋಗಲು ನಿರ್ಧರಿಸಿದೆವು.
(ಮದುವೆಯ ಬಂಧನಕ್ಕೆ ಒಳಗಾಗುವ ಮುನ್ನವೇ ಆದಷ್ಟು ಜಾಗಗಳನ್ನು ಸುತ್ತಬೇಕೆಂಬ ಸಿದ್ಧಾಂತ ನಮ್ಮದಾಗಿತ್ತು. ಸಂಸಾರ ಸಾಗರದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಸಾಧ್ಯವಿಲ್ಲ ಎನ್ನುವುದು ಎಲ್ಲೆಡೆ ಪ್ರಚಲಿತವಿರುವ ವಾದ).
ಕೇಳಿ ತಿಳಿ ಎಂಬಂತೆ, ತಿಳಿದವರಿಂದ ಹಾಗೂ ಗೂಗಲ್ ಮಾಮನಿಂದ ಮಾಹಿತಿ ಕಲೆಹಾಕಿ ನಮ್ಮ ಪ್ರವಾಸದ ರೂಪುರೇಷೆ ಸಿದ್ಧಗೊಳಿಸಿದೆವು :
ಹರಿದ್ವಾರ - ಋಷಿಕೇಶ - ಡೆಹರಾಡುನ್ - ಮಸ್ಸೂರಿ - ಡಾಲ್ಹೌಸಿ - ಧರಮಶಾಲ - ಅಮೃತಸರ - ದೆಹಲಿ.
‘Operation Big Elephant’ ಎಂದು ನಮ್ಮ ಈ ಪ್ರವಾಸಕ್ಕೆ ನಾಮಕರಣ ಮಾಡಿದೆವು.
(ಪ್ರವಾಸಿ ಸ್ಥಳಗಳನ್ನು ತೋರಿಸುತ್ತಿರುವ ಗೂಗಲ್ ನಕ್ಷೆ)
ಆನೆಯನ್ನು ಪಳಗಿಸುವುದು ಸುಲಭದ ಕೆಲಸವೇ? ಅದಕ್ಕಾಗಿ ಬೆಂಗಳೂರಿನಲ್ಲಿದ್ದ ಗೆಳೆಯರನ್ನು ಸಂಪರ್ಕಿಸಿ ಪ್ರವಾಸದ ಬಗ್ಗೆ ತಿಳಿಸಿದಮೇಲೆ ಒಟ್ಟು ಎಂಟು ಜನರ ಉತ್ಸಾಹಿ ತಂಡವು ಸಿದ್ಧವಾಯಿತು - ಅಜಯ್, ಉದಯ್, ರವಿ, ರಾಘವ, ಅಡಿಗ, ಯತೀಶ್, ಲೋಕೇಶ್ ಹಾಗೂ ನಾನು.
ಪ್ರಯಾಣ ಹಾಗೂ ಉಳಿದುಕೊಳ್ಳುವ ವ್ಯವಸ್ಥೆಯದ್ದೆ ಪ್ರಮುಖ ಸವಾಲಾಗಿತ್ತು. ಅದಲ್ಲದೆ ನಮ್ಮ ಕೆಲವು ಪ್ರಮುಖ ಸಾಹಸ ಚಟುವಟಿಕೆಗಳಾದ ರಾಫ್ಟಿಂಗ್, ಬಂಗೀ ನೆಗೆತ ಹಾಗೂ ಚಾರಣಗಳಿಗೂ ಸೂಕ್ತ ಯೋಜನೆಗಳನ್ನು ರೂಪಿಸಬೇಕಿತ್ತು. ಮತ್ತೆ ನೆನಪಾಗಿದ್ದು ಗೂಗಲ್ ಮಾಮ. ಫೇಸ್ಬುಕ್, ವಾಟ್ಸ್ಆಪ್ ತಾಣಗಳಲ್ಲಿ ಬಹಳ ಚರ್ಚೆಗಳು, ಅಲ್ಲಿನ ಜನರನ್ನು ಸಂಪರ್ಕಿಸುವುದು, ಹೀಗೆ ಬಹಳ ಪ್ರಯತ್ನದ ನಂತರ ಕಡೆಗೂ ಎಲ್ಲವೂ ವ್ಯವಸ್ತಿತವಾಗಿದೆ ಎನ್ನುವ ಸ್ಥಿತಿಗೆ ತಲುಪಿದೆವು. ಇಷ್ಟೆಲ್ಲಾ ಕೆಲಸದ ನಂತರ ನಾವು ಭಾರತದ ಯೋಜನಾ ಆಯೋಗ ಸೇರಲು ಅರ್ಹ ಅಭ್ಯರ್ಥಿಗಳು ಎನಿಸಿದ್ದು ಸುಳ್ಳಲ್ಲ :D
(ಪ್ರಯಾಣ ಹಾಗೂ ಇತರ ವಿವರಗಳನ್ನು ಮುಂದೆ ನೀಡುತ್ತೇನೆ). ಸದ್ಯಕ್ಕೆ, ಮುಂಬರುವ ಮಜದ ದಿನಗಳನ್ನು ಎದುರು ನೋಡುತ್ತಾ ಕುಳಿತೆವು.
ರಾಜಧಾನಿಯಲ್ಲಿ ರಾಜಧಾನಿಗೆ ಪಯಣ
ಗುರುವಾರ, ೨೮ ಮೇ ೨೦೧೫, ಬೆಂಗಳೂರು, ರಾತ್ರಿ ೮:೨೦
ನಾವು ನಾಲ್ವರು ಕರ್ನಾಟಕದ ರಾಜಧಾನಿಯಿಂದ ಭಾರತದ ರಾಜಧಾನಿಗೆ ರಾಜಧಾನಿ ಎಕ್ಸ್ಪ್ ಪ್ರೆಸ್ ರೈಲಿನಲ್ಲಿ ಹೊರಟೆವು. ಕಾರಣಾಂತರಗಳಿಂದ ಕೆಲವರು ವಿಮಾನದಲ್ಲಿ ಬರುವವರಿದ್ದರು. ಒಟ್ಟಾರೆ ಎಲ್ಲರೂ ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಸೇರುವುದೆಂದು ತೀರ್ಮಾನಿಸಿದ್ದೆವು. ಎರಡು ಹಗಲು, ಒಂದು ರಾತ್ರಿ - ಒಟ್ಟು ಮೂವತ್ಮೂರುವರೆ ಗಂಟೆಗಳ ಪ್ರಯಾಣವಾಗಿತ್ತದು. ಅತ್ಯಂತ ವೇಗವಾಗಿ, ಗರಿಷ್ಠ ಗಂಟೆಗೆ ೧೪೦ ಕಿ.ಮೀ ವೇಗದಲ್ಲಿ ಸಾಗುವ, ದೇಶದಲ್ಲೇ ಅತಿ ಹೆಚ್ಚಿನ ಪ್ರಾಮುಖ್ಯತೆಯುಳ್ಳ ರೈಲಿನಲ್ಲಿ ಪ್ರಯಾಣ ಮಾಡಲು ನಾವೆಲ್ಲಾ ಉತ್ಸುಕರಾಗಿದ್ದೆವು. ಊಟದ ವೆಚ್ಚವೂ ಸೇರಿದಂತೆ ಪ್ರಯಾಣದರ ೨೯೦೦ ರೂಪಾಯಿಗಳಾಗಿದ್ದವು.
ಪ್ರಯಾಣದ ಆರಂಭವು ಒಳ್ಳೆಯ ಊಟದೊಂದಿಗೆ ಶುರುವಾಯಿತು. ನಂತರದ ದಿನದಂದು ‘ಉನೋ’ ಕಾರ್ಡುಗಳಲ್ಲಿ ಆಟ ಆಡುತ್ತಾ, ಪುಸ್ತಕ ಓದುತ್ತಾ ಕಾಲ ಕಳೆದೆವು. ನಾನು ಅಮೀಶ್ ರವರ ‘ದಿ ಸೀಕ್ರೆಟ್ ಆಫ್ ನಾಗಾಸ್’ ಪುಸ್ತಕ ಓದುತ್ತಾ ಕುಳಿತಿದ್ದೆ. ರೈಲಿಗೆ ಬಹಳ ನಿಯಮಿತ ಸ್ಥಳಗಳಲ್ಲಿ ನಿಲುಗಡೆ ಇತ್ತು. ನಾಗ್ಪುರದಲ್ಲಿ ಮಧ್ಯಾಹ್ನ ೩:೩೦ ಸುಮಾರಿಗೆ ನಿಲ್ಲಿಸಲು, ತಾಜಾ ಗಾಳಿ ಸೇವಿಸಲು ಹೊರಗಡೆ ಬಂದೆವು. ಕಾದ ಕೆಂಡದಂತಿದ್ದ ವಾತಾವರಣದಲ್ಲಿ ಫ್ಯಾನುಗಳು ಕೂಡ ಬಿಸಿ ಗಾಳಿ ಉಗುಳುತ್ತಿದ್ದವು. ರೈಲಿನ ಒಳಗೇ ಲೇಸೆಂದು ನಾವು ವಾಪಾಸ್ ದೌಡಾಯಿಸಿದೆವು. ಒಂದು ಹಿತಕರ ಪ್ರಯಾಣದ ನಂತರ ಶನಿವಾರ ಬೆಳಿಗ್ಗೆ ೬:೧೫ ರ ಸುಮಾರಿಗೆ ಹ.ನಿಜಾಮುದ್ದೀನ್ ನಿಲ್ದಾಣ ತಲುಪಿದೆವು. ನಿರೀಕ್ಷಣಾ ಕೊಠಡಿಯಲ್ಲಿ ತಯಾರಾದ ನಂತರ, ನವದೆಹಲಿ ಮುಖ್ಯ ರೈಲು ನಿಲ್ದಾಣಕ್ಕೆ(೧೦ ನಿಮಿಷದ ಪ್ರಯಾಣ) ಹೊರಟೆವು. ಹರಿದ್ವಾರಕ್ಕೆ ಹೋಗಲು ೧೧ ಗಂಟೆಗೆ ರೈಲು ಹಿಡಿಯಬೇಕಿತ್ತು.
ಪವಿತ್ರ ಹರಿದ್ವಾರ
ಭಗವಾನ್ ವಿಷ್ಣುವನ್ನು ತಲುಪುವ ಬಾಗಿಲು ಎಂಬರ್ಥವುಳ್ಳ ಹರಿದ್ವಾರಕ್ಕೆ(ಹರಿ-ವಿಷ್ಣು,ದ್ವಾರ-ಬಾಗಿಲು) ಹರದ್ವಾರ(ಹರ-ಶಿವ) ಎಂಬ ಹೆಸರೂ ಉಂಟು. ಈ ಸ್ಥಳವು ಭಾರತದ ಏಳು ಮುಖ್ಯ ಪವಿತ್ರ ಕ್ಷೇತ್ರಗಳಲ್ಲಿ ಒಂದು.
ಅಯೋಧ್ಯಾ ಮಥುರಾ ಮಾಯಾ ಕಾಶೀ ಕಂಚೀ ಅವಂತಿಕಾ।
ಪುರಿ ದ್ವಾರಾವತಿ ಚೈವ ಸಪ್ತೈತೆ ಮೊಕ್ಷದಾಯಿಕಾಃ ।।
ಗರುಡಪುರಾಣದ ಮೇಲಿನ ಶ್ಲೋಕ ನಮ್ಮ ನಾಡಿನ ಸಪ್ತ ಪವಿತ್ರ ಕ್ಷೇತ್ರಗಳನ್ನು ತಿಳಿಸುತ್ತದೆ. (ಮಾಯಾ - ಹರಿದ್ವಾರ)
ಸಂಜೆ ಹೊತ್ತಿಗೆ ಹರಿದ್ವಾರ ತಲುಪಿದ ನಮ್ಮನ್ನು ಅಲ್ಲಿನ ಬಿಸಿಲ ಝಳ ಸ್ವಾಗತಿಸಿತು. ಒಂದು ಹೋಟೆಲಿನಲ್ಲಿ ತಾತ್ಕಾಲಿಕ ವಸತಿ, ವಿಶ್ರಾಂತಿ ಪಡೆದು ಸೂರ್ಯಾಸ್ತದ ಹೊತ್ತಿಗೆ ತಯಾರಾಗಿ ಅಲ್ಲಿನ ವಿಶೇಷ ‘ಗಂಗಾ ಆರತಿ’ ನೋಡಲು ವಿದ್ಯುಚ್ಚಾಲಿತ ರಿಕ್ಷಾದಲ್ಲಿ ಹೊರಟೆವು. ಮೈದುಂಬಿ ಹರಿಯುತ್ತಿದ್ದ ಗಂಗೆಯನ್ನು ಪ್ರಥಮ ಬಾರಿಗೆ ನೋಡಿದ್ದು ಅವಾಗಲೇ. ಗಂಗೇಚ ಯಮುನೇಚ ಎಂಬ ಶ್ಲೋಕದಲ್ಲಿ ದಿನಾ ಗಂಗೆಯನ್ನು ನೆನೆಯುತ್ತಿದ್ದ ನನಗೆ ಗಂಗಾ ನದಿಯ ದರ್ಶನದಿಂದ ರೋಮಾಂಚನವಾಯಿತು. ಇಕ್ಕೆಲಗಳಲ್ಲಿ ಸ್ನಾನ ಮಾಡುತ್ತಿದ್ದ ಭಕ್ತರ ಪಾಪಗಳನ್ನು ತೊಳೆಯುತ್ತಾ ಸಾಗುತ್ತಿದ್ದ ಗಂಗಾ ಮಾತೆಗೆ ನಮಸ್ಕರಿಸಿ ‘ಹರ್ ಕಿ ಪೌರಿ’ ಎಂಬ ಸ್ಥಳಕ್ಕೆ (ಸ್ಥಳೀಯರಲ್ಲಿ ಯಾರು ಬೇಕಾದರೂ ಆರತಿ ನಡೆಯುವ ಸ್ಥಳ ತೋರಿಸುತ್ತಾರೆ) ಗಂಗಾ ಆರತಿ ನೋಡಲು ಹೋದೆವು.
(ಗಂಗಾ ಮಾತೆಯ ಪ್ರಥಮ ದರ್ಶನ)
ಗಂಗಾ ಆರತಿಯ ಬಗ್ಗೆ ನಾನು ಪ್ರಪ್ರಥಮವಾಗಿ ಕೇಳಿದ್ದು ನನ್ನ ೮ನೇ ತರಗತಿಯಲ್ಲಿದ್ದ ‘ಗಂಗೆಯಲ್ಲಿ ದೀಪಮಾಲೆ’ ಎಂಬ ಕನ್ನಡ ಪಾಠದಲ್ಲಿ. ಶ್ರೀ ಜಿ.ಎಸ್.ಶಿವರುದ್ರಪ್ಪನವರು ಗಂಗಾ ಆರತಿಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರು. ಜನಜಂಗುಳಿಯ ನಡುವೆ ಹೇಗೋ ದಾರಿ ಮಾಡಿಕೊಂಡು ವೀಕ್ಷಣೆಗೆ ಒಂದು ಸ್ಥಳ ಹುಡುಕುವಲ್ಲಿ ಸಫಲರಾದೆವು. ಅರ್ಚಕರು ಗಂಗಾ ಮಾತೆಗೆ ಪೂಜೆ ಮಾಡುತ್ತಿದ್ದರು. ಗಂಗಾ ಮಾತೆಯನ್ನು ಭಜಿಸುವ ಹಾಡುಗಳಿಗೆ ಜನರು ದನಿಗೂಡಿಸಿದ್ದರು. ಎಲ್ಲವೂ ಸೇರಿ ಮನಮೋಹಕವಾದ ವಾತಾವರಣವು ನಿರ್ಮಾಣವಾಗಿತ್ತು. ಎಂಥವರನ್ನೂ ಭಕ್ತಿಯಲ್ಲಿ ತೇಲಿಸುವ ಅದ್ಭುತ ಶಕ್ತಿಯಿತ್ತು. ನದಿಯನ್ನು ತಾಯಿಯೆಂದು ಕಾಣುವ ಹಿರಿಯರ ಪರಿಕಲ್ಪನೆಯೇ ಎಷ್ಟೊಂದು ಸೊಗಸಲ್ಲವೇ? ನಮ್ಮ ಆಚಾರ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಇನ್ನಷ್ಟು ಜಾಸ್ತಿಯಾಯಿತು. ಸುರ್ಯಾಸ್ತವಾಗುತ್ತಿದ್ದಂತೆ ಸುಮಾರು ಏಳೂವರೆ ಗಂಟೆಗೆ ಮುಖ್ಯ ಆರತಿ ಶುರುವಾಯಿತು (ಅಲ್ಲಿ ಬೇಸಿಗೆಯಲ್ಲಿ ದೀರ್ಘ ಹಗಲುಗಳಿರುತ್ತವೆ). ಆರತಿಯ ಸಮಯದಲ್ಲಿ ವಿದ್ಯುಸ್ಸಂಚಾರವಾದಂತಹ ವಾತಾವರಣ ನಿರ್ಮಾಣವಾಗಿತ್ತು. ಎಂತಹ ನಾಸ್ತಿಕರನ್ನೂ ಕೂಡ ಆಸ್ತಿಕರನ್ನಾಗಿ ಪರಿವರ್ತಿಸುವ ಶಕ್ತಿ ಅಲ್ಲಿತ್ತು ಎಂದರೆ ಬಹುಶಃ ಉತ್ಪ್ರೇಕ್ಷೆಯಾಗಲಾರದು.
(ಹರಿದ್ವಾರದಲ್ಲಿನ ಗಂಗಾ ಆರತಿ)
ಮಾರನೆಯ ದಿನ ಋಷಿಕೇಶದಲ್ಲಿ ರಾಫ್ಟಿಂಗ್ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ನಿರಂತರ ಪಯಣದಿಂದ ನನ್ನ ಆರೋಗ್ಯಸ್ಥಿತಿ ಸ್ವಲ್ಪ ಹದಗೆಟ್ಟಿತ್ತು. ರಾಫ್ಟಿಂಗ್ ಸುಸೂತ್ರವಾಗಿ ನಡೆಯಲೆಂದು ಎಲ್ಲರ ಪರವಾಗಿ ಗಂಗಾ ಮಾತೆಯಲ್ಲಿ ಪ್ರಾರ್ಥಿಸಿಕೊಂಡೆ. ಆರತಿಯ ನಂತರ ರೂಂಗೆ ತೆರಳುವ ಮುನ್ನ ರಸ್ತೆ ಬದಿಯ ಚಾಟ್ಸ್ ಸವಿದೆವು. ಅಲ್ಲೊಂದು ಕಡೆ ಕುಡಿದ ಲಸ್ಸಿಯಂತೂ ಅತ್ಯಮೋಘವಾಗಿತ್ತು. ಋಷಿಕೇಶದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಹರಿದ್ವಾರದಿಂದ ಋಷಿಕೇಶದ ಕಡೆಗೆ ಒಂದು ರಿಕ್ಷಾದಲ್ಲಿ ಹೊರಟೆವು. (ಸುಮಾರು ಒಂದು ಘಂಟೆಯ ಪ್ರಯಾಣ). ಗಂಗಾ ಮಾತೆಯ ದರ್ಶನದ ಧನ್ಯತಾಭಾವ, ಮುಂಬರುವ ಸಾಹಸ,ಮಜದ ಚಟುವಟಿಕೆಗಳನ್ನು ನೆನೆಯುತ್ತಾ ಹೊರಟೆವು.
ಪ್ರಶಾಂತ ಋಷಿಕೇಶ
ವಿಶ್ವ ಯೋಗ ಹಾಗೂ ಧ್ಯಾನದ ರಾಜಧಾನಿ ಎಂಬ ತನ್ನ ಖ್ಯಾತಿಗೆ ತಕ್ಕಂತೆ ಋಷಿಕೇಶವು ಪ್ರಶಾಂತತೆಯನ್ನು ಹೊದ್ದುಕೊಂಡಂತಿತ್ತು. ಗಂಗೆಯು ಎಂದಿನಂತೆ ಮನೋಹರವಾಗಿ ಹರಿಯುತ್ತಿದ್ದಳು. ನಾವು ‘ರಾಮ್ ಝೂಲ’ ಎಂಬ ಹೆಸರಿನ ತೂಗುಸೇತುವೆ ಬಳಸಿ ನದಿ ದಾಟಬೇಕಿತ್ತು(ಹಿಂದಿಯಲ್ಲಿ ಝೂಲ ಎಂದರೆ ಉಯ್ಯಾಲೆ ಎಂಬರ್ಥವಿದೆ). ಸೇತುವೆಯ ಮೇಲೆ ಡಾಂಬರಿನ ಸಣ್ಣ ರಸ್ತೆಯಿತ್ತು. ರಭಸವಾಗಿ ಬೀಸುತ್ತಿದ್ದ ಗಾಳಿಗೆ ಸ್ವಲ್ಪ ಒಲಾಡುತ್ತಿತ್ತು ಆ ಸೇತುವೆ. ಎರಡೂ ಬದಿಯಲ್ಲಿರುವ ಬಲಿಷ್ಠ ಕಬ್ಬಿಣದ ತಡೆಗಳಿಲ್ಲದಿದ್ದರೆ ಯಾರಾದರೂ ಆಯತಪ್ಪಿ ನದಿಗೆ ಬೀಳುವರೇನೋ ಎನಿಸುತ್ತಿತ್ತು.
(ರಾಮ್-ಝೂಲಾ ದ ಮನಮೋಹಕ ನೋಟ)
ಸ್ವಲ್ಪ ಹುಡುಕಾಟದ ನಂತರ ನಾವು ಉಳಿದುಕೊಳ್ಳಬೇಕಿದ್ದ ಹೋಟೆಲು ‘ಗಾಯತ್ರಿ ಕುಂಜ್’ ಗೆ ತಲುಪಿದೆವು. ಕೊಠಡಿಗಳು ಸುಸಜ್ಜಿತವಾಗಿ ಇದ್ದವು. ಪ್ರಯಾಣದ ಆಯಾಸವಿದ್ದುದರಿಂದ ಬಹುಬೇಗ ನಿದ್ರಾದೇವಿಗೆ ಶರಣಾದೆವು. ಬೆಳಿಗ್ಗೆ ಬಹುಬೇಗ ನಮ್ಮನ್ನು ಎಚ್ಚರಿಸಿದ್ದು ಜೋರಾಗಿ ಬಡಿದುಕೊಳ್ಳುತ್ತಿದ್ದ ಕಿಟಕಿ-ಬಾಗಿಲುಗಳು. ಪರ್ವತ ಪ್ರದೇಶಗಳಲ್ಲಿ ಜೋರು ಗಾಳಿ ಸಾಮಾನ್ಯ ಎಂದರಿತ ನಾವು ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಪುನಃ ನಿದ್ದೆ ಹೋದೆವು. ರಾಫ್ಟಿಂಗ್ ತರಬೇತುದಾರನ ಸೂಚನೆಯಂತೆ ಬೆಳಿಗ್ಗೆ ಬೇಗ ಹೋಗಬೇಕಿತ್ತು. ಹಾಗಾಗಿ ಸುಮಾರು ೮ ಗಂಟೆಯ ಹೊತ್ತಿಗೆ ನಮ್ಮ ಪ್ರವಾಸದ ಒಂದು ಬಹುಮುಖ್ಯ ಚಟುವಟಿಕೆಗೆ ಸಿದ್ಧರಾಗಿ ಹೊರಟೆವು.
ಋಷಿಕೇಶದಲ್ಲಿ ರಭಸವಾಗಿ ಹರಿವುಂಟು ಮಾಡುವ ಗಂಗಾನದಿಯಲ್ಲಿ ರಾಫ್ಟಿಂಗ್ ಮಾಡುವ ಅನುಭವವೇ ಬೇರೆ. ಹಾಗಾಗಿ ರಾಫ್ಟಿಂಗ್ ಅಲ್ಲಿ ಮರೆಯದೇ ಕೈಗೊಳ್ಳಬೇಕಾದ ಚಟುವಟಿಕೆಯಾಗಿದೆ. ಸುರಕ್ಷಿತವಾಗಿ ರಾಫ್ಟಿಂಗ್ ಮಾಡಿಸುವ ಹಲವಾರು ಕಂಪನಿಗಳು ಇವೆ. ಅದರಲ್ಲಿ Paddle India ಪ್ರಮುಖವಾದ ಕಂಪೆನಿಗಳಲ್ಲಿ ಒಂದು. ಪ್ರಯಾಣದ ದೂರದ ಮೇಲೆ ಹಲವಾರು ವಿಧಗಳಿವೆ. ಅದರಲ್ಲಿ ನಾವು ‘ಮರೀನ್ ಡ್ರೈವ್’ (ಸುಮಾರು ೨೪ ಕಿ.ಮೀ ದೂರದ್ದು) ಆಯ್ಕೆ ಮಾಡಿಕೊಂಡಿದ್ದೆವು. ರಾಫ್ಟಿಂಗ್ ಶುರುಮಾಡುವ ಸ್ಥಳಕ್ಕೆ ಜೀಪಿನಲ್ಲಿ ತಲುಪಿ, ಮಧ್ಯ ಕೊಂಡುಕೊಂಡಿದ್ದ ಪರೋಟ ಹಾಗೂ ಹಣ್ಣಿನ ರಸದಿಂದ ನಮ್ಮ ದೇಹಕ್ಕೆ ಇಂಧನವನ್ನು ತುಂಬಿಸಿಕೊಂಡೆವು. ಇಬ್ಬರು ರಾಫ್ಟಿಂಗ್ ತರಬೇತುದಾರರಿದ್ದರು. ಅವರ ಸೂಚನೆಗಳನ್ನು ವಿಧೇಯ ವಿದ್ಯಾರ್ಥಿಗಳಂತೆ ಆಲಿಸಿದ ಮೇಲೆ ಸುರಕ್ಷಣಾ ತಲೆಗವಚ, ಜಾಕೆಟ್ ಧರಿಸಿ ರಾಫ್ಟ್ ಚಲಾಯಿಸುವ ಹುಟ್ಟು ಹಿಡಿದು ಅತ್ಯುತ್ಸಾಹದಿಂದ ತಯಾರಾದೆವು.
ನನಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಂತೆ ಕಂಡರೂ ಗೆಳೆಯರ ಪ್ರೋತ್ಸಾಹ ಉತ್ಸಾಹದ ಚಿಲುಮೆಯನ್ನೇ ಹರಿಸಿತು. ಶುರುವಿನಲ್ಲೇ ಡ್ರೈವರ್ ಸೀಟ್ ಎನ್ನಬಹುದಾದ ಅತ್ಯುತ್ತಮ ಸ್ಥಾನದಲ್ಲಿ ಕುಳಿತಿದ್ದೆ. ನಮ್ಮ ಪ್ರಯಾಣದಲ್ಲಿ ಒಟ್ಟು ಹದಿಮೂರು ರಭಸದ ಸ್ಥಳಗಳಿದ್ದವು (‘Rapids’ ಎಂದು ಹೆಸರು). ಪ್ರಾಕೃತಿಕವಾಗಿ ಬಂಡೆಗಳ ಕೊರೆತ ಹಾಗೂ ನೀರಿನ ಆಳದ ವ್ಯತ್ಯಾಸದಿಂದ ಕೆಲವು ಕಡೆ ನದಿಯು ರಭಸವಾಗಿ ಹರಿಯುತ್ತಿತ್ತು. ಪ್ರತಿಯೊಂದು ರಾಪಿಡ್ ಕೂಡ ವಿಶಿಷ್ಟವಾದ ಹೆಸರು ಹೊಂದಿತ್ತು. (Welcome, Butterfly, Sweet sixteen, Back to the Center, Golf Course, Roller Coaster, Cross-Fire, Double Trouble) ಹೀಗೆ ಹೆಸರುಗಳು ಸಾಗುತ್ತವೆ. ಗ್ರೇಡ್-೧ ರಿಂದ ಗ್ರೇಡ್-೪ ವರೆಗೂ ರಾಪಿಡ್ ಇದ್ದವು. ರಾಪಿಡ್ ಮೂಲಕ ರಾಫ್ಟ್ ಹಾದುಹೋಗುವಾಗ ಮುಖಕ್ಕೆ ರಭಸವಾಗಿ ರಾಚುವ ನೀರು, ಓಲಾಡುವ ರಾಫ್ಟ್, ಇಂತಹ ಮಜದ ಅನುಭವಗಳ ಮಧ್ಯ ಸಾಗುತ್ತಿತ್ತು ನಮ್ಮ ಪಯಣ. ನದಿಯ ಇಕ್ಕೆಲಗಳಲ್ಲೂ ಹಸುರಿನಿಂದ ಮೈದುಂಬಿ ನಿಂತಿದ್ದ ಬೆಟ್ಟಗಳು, ಸೂರ್ಯನ ಜೊತೆ ಆಟವಾಡುತ್ತಿದ್ದ ಮೋಡಗಳು, ಎಲ್ಲವೂ ಸೇರಿ ಸ್ವರ್ಗವೇ ಭೂಮಿಗೆ ಇಳಿದಂತಿತ್ತು. ರಾಫ್ಟ್ ಇಂದ ದೂರ ಹೋಗಬಾರದು ಎನ್ನುವ ಷರತ್ತಿನ ಮೇಲೆ ನೀರಿಗಿಳಿಯಲು ಬಿಟ್ಟಿದ್ದರು ನಮ್ಮ ತರಬೇತುದಾರರು. ಮೇಲೆ ಸೂರ್ಯನ ಬಿಸಿಲು, ಕೆಳಗೆ ತಣ್ಣನೆಯ ನೀರು - ಪ್ರಕೃತಿಯು ತನ್ನ ಅದ್ಭುತ ಸಮತೋಲನವನ್ನು ಪ್ರದರ್ಶಿಸಿತ್ತು. ಸುಮಾರು ಮೂರು ಗಂಟೆಗಳ ಅದ್ಭುತ ಪ್ರಯಾಣದ ನಂತರ ರಾಮ್-ಝೂಲದಲ್ಲಿ ನಮ್ಮ ರಾಫ್ಟಿಂಗ್ ಕೊನೆಗೊಂಡಿತು.
ರಾಫ್ಟಿಂಗ್ ನಂತರ ಬಹಳ ದಣಿವಾಗಬಹುದೆಂದು ಎಣಿಸಿದ್ದ ನಮಗೆ ರಾಫ್ಟಿಂಗ್ ತರುವಾಯ ಒಂದು ಹೊಸ ಚೈತನ್ಯ ಮೂಡಿತು. ಬಹಳ ಬಾಯಾರಿದ್ದ ನಮಗೆ ನಿಂಬೆ ಸೋಡಾ ಅಮೃತದಂತೆ ಕಂಡಿತು. ನಂತರ ಗ್ರಾಹಕರನ್ನು ಸೆಳೆಯುತ್ತಿದ್ದ ‘ಛೋಟಿವಾಲಾ’ ಹೋಟೆಲ್ಲಿಗೆ ಭೋಜನಕ್ಕೆ ಹೋದೆವು. ಸಾಧಾರಣ ಭೋಜನದ ನಂತರ ನಿದ್ರೆ ಹೋದೆವು. ಮತ್ತೆ ಸಂಜೆ ನಮ್ಮನ್ನು ಎಬ್ಬಿಸಿದ್ದು ಕಿಟಕಿ ಬಾಗಿಲುಗಳ ಸದ್ದು. ಸಂಜೆ ಋಷಿಕೇಶದಲ್ಲಿ ನಡೆಯುವ ಗಂಗಾ ಆರತಿ ನೋಡಲು ಹೊರಟೆವು. ಹರಿದ್ವಾರದ ಆರತಿಗೆ ಹೋಲಿಸಿದಲ್ಲಿ ಇಲ್ಲಿನ ಆರತಿ ಬೇರೆಯ ತರಹವೇ ಇತ್ತು - ಲೆಕ್ಕ ಹಾಕಬಹುದಾದಷ್ಟು ಜನ, ಪ್ರಶಾಂತ ಹಾಗೂ ಎಲ್ಲರಿಗೂ ಆರತಿ ಮಾಡುವ ಅವಕಾಶ. ಇಲ್ಲಿಯೂ ಗಂಗಾ ಮಾತೆಯ ಆಶೀರ್ವಾದ ಪಡೆದು ಬೀದಿ ಬದಿಯ ಚಾಟ್ಸ್ ಆಸ್ವಾದಿಸಿದ ಮೇಲೆ (ಉತ್ತರ ಭಾರತದಲ್ಲಿ ಚಾಟ್ಸ್ ಬಹಳ ಪ್ರಸಿದ್ಧಿ.) ರಾಮ್ ಝೂಲಾದ ಇನ್ನೊಂದು ಬದಿಯಲಿದ್ದ ‘ಛೋಟಿವಾಲಾ’ ಎಂಬ ಅದೇ ಹೆಸರಿನ ಇನ್ನೊಂದು ಶಾಖೆಗೆ ಹೋದೆವು. ಈ ಹೋಟೆಲ್ಲು ವಾತಾವರಣ, ಆಹಾರದ ರುಚಿ ಎಲ್ಲ ತರಹದಲ್ಲೂ ಮಧ್ಯಾಹ್ನ ಹೋಗಿದ್ದಕ್ಕಿಂತ ಬಹಳ ಚೆನ್ನಾಗಿತ್ತು.
(ನಮ್ಮ ಹೋಟೆಲಿನಿಂದ ಮುಂಜಾನೆಯ ನೋಟ) (ಋಷಿಕೇಶದಲ್ಲಿನ ಸೂರ್ಯಾಸ್ತ)
ಬೆಳಕಿಗೆ ದ್ವಿಗುಣವಿದೆ - ತರಂಗ ಹಾಗೂ ಕಣ ಎಂದು ವಿಜ್ಞಾನದಲ್ಲಿ ವಾದವಿದೆ. ಋಷಿಕೇಶವೂ ಇದಕ್ಕಿಂತ ಭಿನ್ನವಾಗಿದೆ ಎನಿಸಲಿಲ್ಲ. ಒಂದೆಡೆ ಆಧ್ಯಾತ್ಮಿಕ ಅಲೆಯಿಂದ ಮುಚ್ಚಿದ್ದರೆ ಮತ್ತೊಂದೆಡೆ ಸಾಹಸ ಕ್ರೀಡೆಗಳ ಉತ್ಸಾಹದ ಕಣಗಳು ತುಂಬಿದ್ದವು. ಎರಡರ ನಡುವೆ ಸಮತೋಲನ ಕೈದುಕೊಂಡಿದ್ದ ಈ ಸ್ಥಳವು ಎಂತಹ ಪ್ರವಾಸಿಗರನ್ನೂ ನಿರಾಸೆಗೊಳಿಸದು. ಇದೇ ಕಾರಣದಿಂದ ಈ ಸ್ಥಳವು ಅನನ್ಯವಾಗಿ ಗೋಚರಿಸಿತು. ನಮ್ಮ ಸಂಸ್ಕೃತಿಯ ಜೊತೆ ಖುಷಿಯಿಂದ ಬೆರೆತಿದ್ದ ಹಲವಾರು ವಿದೇಶಿ ಪ್ರವಾಸಿಗರು ಕಾಣಸಿಗುತ್ತಾರೆ ಅಲ್ಲಿ. ಸುಂದರ ಮಂದಿರಗಳು, ಎಲ್ಲೆಲ್ಲೂ ಕಾಣಸಿಗುವ ಸಾಧು ಸಂತರು, ದೇವರ ಪ್ರತಿಮೆಗಳು - ಇವೆಲ್ಲವೂ ಸೇರಿ ಋಷಿಕೇಶವನ್ನು ಅದ್ಭುತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ಥಳವನ್ನಾಗಿ ಮಾಡಿದ್ದವು. ಶ್ರೀಮಂತ ಸಂಸ್ಕೃತಿ,ವೈವಿಧ್ಯತೆ ಹೊರಸೂಸುವುದರ ಜೊತೆಗೆ, ಋಷಿಕೇಶವು ರೋಮಾಂಚನಕಾರಿ ಕೂಡ ಆಗಿತ್ತು.
(ಎಡದಿಂದ ಗಡಿಯಾರದ ಚಲನೆಯಂತೆ : 1. ಋಷಿಕೇಶದ ಮಂದಿರ, 2. ಗಂಗಾ ಮಾತೆ, 3. ಶ್ರೀರಾಮನು ಭರತನಿಗೆ ಪಾದುಕೆ ನೀಡುತ್ತಿರುವ ದೃಶ್ಯ , 4. ಬೆಟ್ಟಗಳ ನಡುವೆ ಹರಿಯುತ್ತಿರುವ ಗಂಗಾ ಮಾತೆ, 5. ಲಕ್ಷ್ಮಣ್-ಝೂಲಾ ಹಾಗೂ ತ್ರ್ಯಂಬಕೇಶ್ವರ ಮಂದಿರ)
“ಗಂಗಾ ಸ್ನಾನ, ತುಂಗಾ ಪಾನ” ಎಂಬುದು ಹಿಂದಿನಿಂದ ಬಂದಿರುವ ನಾಣ್ಣುಡಿ. ಮರುದಿನ ಬೆಳಿಗ್ಗೆ ಗಂಗಾ ನದಿಯಲ್ಲಿ ಮಿಂದ ಧನ್ಯತಾಭಾವದಿಂದ ‘ತ್ರ್ಯಂಬಕೇಶ್ವರ’ ಮಂದಿರಕ್ಕೆ ಭೇಟಿ ನೀಡಿದೆವು. ಏಳು ಅಂತಸ್ತಿನ ಬಹಳ ದೊಡ್ಡ ಮಂದಿರವಾಗಿದ್ದ ಅಲ್ಲಿ ಮುಕ್ಕೋಟಿ ದೇವತೆಗಳೂ ನೆಲೆಸಿದ್ದಂತೆ ಇತ್ತು. ನಂತರ ಲಕ್ಷ್ಮಣ್ ಝೂಲ(ಮತ್ತೊಂದು ತೂಗುಸೇತುವೆ) ಬಳಿ ವಸ್ತು, ವಸ್ತ್ರ ಖರೀದಿಗೆ ಒಳ್ಳೆಯ ಅಂಗಡಿಗಳಿದ್ದವು. ಅಲ್ಲೊಂದಿಷ್ಟು ಶಾಪಿಂಗ್ ಮಾಡಿದೆವು. ಕೆಲವು ಗೆಳೆಯರು ಬಂಗೀ ನೆಗೆತ ಮಾಡಲು ಹೋಗಿದ್ದರು. ಅವರು ವಾಪಸ್ಸಾದ ಮೇಲೆ ಎಲ್ಲರೂ ಕೂಡಿ ಡೆಹ್ರಾಡೂನ್ ಕಡೆಗೆ(೪೫ ಕಿ.ಮೀ ದೂರ) ಬಾಡಿಗೆಗೆ ಖರೀದಿಸಿದ್ದ ಬೈಕುಗಳಲ್ಲಿ ಹೊರಟೆವು.
ಡೆಹ್ರಾಡೂನ್
ಉರಿಬಿಸಿಲಲ್ಲಿ ಗಾಡಿ ಚಲಾಯಿಸುತ್ತಾ, ಮಧ್ಯೆ ಸೋಡಾದ ಬಂಡಿ ಸಿಕ್ಕಾಗ ನಿಂಬೆ ಸೋಡಾ ಇಳಿಸುತ್ತಾ ಸಂಜೆಯ ವೇಳೆಗೆ ಉತ್ತರಾಂಚಲದ ರಾಜಧಾನಿ, ಡೆಹ್ರಾಡೂನ್ ತಲುಪಿದೆವು. ಸ್ಥಳೀಯರಿಂದ ಮಾರ್ಗದರ್ಶನ ಪಡೆಯುತ್ತಾ ‘ತಪಕೇಶ್ವರ ಮಂದಿರ’ ತಲುಪಿದೆವು. ನಗರದ ದಟ್ಟಣೆಯಿಂದ ದೂರ, ಪ್ರಶಾಂತ ಪ್ರದೇಶದಲ್ಲಿರುವ ಗುಹಾ ದೇವಾಲಯವಗಿತ್ತದು. ಪ್ರಾಕೃತಿಕವಾಗಿರುವ ಗುಹೆಯ ಮಧ್ಯೆ ದೇವಾಲಯ ಇದ್ದು ಅಲ್ಲಿ ಶಿವನಿಗೆ ಅಭಿಷೇಕ ಮಾಡಿದ್ದೊಂದು ಸುಂದರ ಅನುಭವ. ನಂತರ ನಮ್ಮ ಮುಂದಿನ ತಾಣವಾದ ‘ರಾಬರ್ಸ್ ಕೇವ್’ (ಸ್ಥಳೀಯರಲ್ಲಿ ‘ಗುಚ್ಚು ಪಾನಿ’ ಎಂದೇ ಪ್ರಸಿದ್ಧ)ನಲ್ಲಿ ಗುಹಾನ್ವೇಷಣೆಗೆ ಹೋದೆವು. ಎತ್ತರದ ಶಿಲೆಗಳಿಂದ ನಿರ್ಮಿತವಾಗಿದ್ದ ಗುಹೆಯಲ್ಲಿ ಮಧ್ಯ ನಡೆಯಲು ಸಪೂರವಾದ ಜಾಗವಿತ್ತು. ಗುಹೆಯ ಮೇಲಿನ ಭಾಗ ತೆರೆದುಕೊಂಡಂತೆ ಇದ್ದುದ್ದರಿಂದ ಸಾಕಷ್ಟು ಬೆಳಕು ಬರುತ್ತಿತ್ತು. ಸಣ್ಣಗಿನ ಮಧ್ಯದ ಜಾಗದಲ್ಲಿ ನೀರು ಹರಿಯುತ್ತಿತ್ತು. ಜಾಸ್ತಿ ಎಂದರೆ ಮೊಣಕಾಲಿನವರೆಗೂ ನೀರು ಇದ್ದಿರಬಹುದು. ಗುಹೆಯ ಕೊನೆಯಲ್ಲೊಂದು ಸಣ್ಣ ಝರಿ. ಇದೆಲ್ಲಾ ಮುಗಿಯುವ ಹೊತ್ತಿಗೆ ಕತ್ತಲಾಗುತ್ತಾ ಬಂದಿತ್ತು, ಹೊಟ್ಟೆಯೊಳಗಿನ ಪರಮಾತ್ಮ ನೈವೇದ್ಯ ಕೇಳುತ್ತಿತ್ತು. ಸೋನೆಮಳೆಯಲ್ಲಿ ಕುರುಕಲು ತಿಂಡಿ ಹಾಗೂ ಬಿಸಿಬಿಸಿ ಮ್ಯಾಗ್ಗಿ(ಪ್ರಾಯಶಃ ನಿಷೇಧಕ್ಕೊಳಗಾಗುವ ಮುಂಚೆ ನಾವು ತಿಂದ ಕಡೆಯ ಮ್ಯಾಗ್ಗಿಯಾಗಿತ್ತದು) ಸವಿದು ನಮ್ಮ ಮುಂದಿನ ತಾಣವಾದ ಮಸ್ಸೂರಿ ಕಡೆಗೆ ಕಣ್ಣುಹಾಯಿಸಿದೆವು. ೩೧ ಕಿ.ಮೀ ದೂರವಿದ್ದ ಗಿರಿಧಾಮವು ಕತ್ತಲಿನಲ್ಲಿ ದೀಪಗಳ ಆಭರಣದಿಂದ ಸಿಂಗಾರಗೊಂಡು ಶೋಭಿಸುತ್ತಿತ್ತು. ತಡಮಾಡದೇ ನಮ್ಮ ಬೈಕುಗಳನ್ನೇರಿ ತಿರುವು-ಮುರುವು ರಸ್ತೆಗಳಲ್ಲಿ ಬೆಟ್ಟವೇರುತ್ತಾ ಮಸ್ಸೂರಿ ಕಡೆಗೆ ಸಾಗಿದೆವು.
(ಮಸ್ಸೂರಿಗೆ ಪ್ರಯಾಣಿಸುತ್ತಿದ್ದಾಗ ಬೆಟ್ಟದ ಮೇಲಿಂದ ಕಂಡ ಡೆಹ್ರಾಡೂನ್)
ಮನಮೋಹಕ ಮಸ್ಸೂರಿ
ಯಾರಾದರೂ ನನ್ನನ್ನು ‘ಸ್ವರ್ಗ ಹೇಗಿರುತ್ತದೆ?’ ಎಂದು ಪ್ರಶ್ನೆ ಮಾಡಿದರೆ, ಮಸ್ಸೂರಿ ಕಡೆಗೆ ತೋರಿಸಿ ಸ್ವರ್ಗ ಹೀಗಿದ್ದಿರಬಹುದು ಎಂದು ಹೇಳುತ್ತೇನೆ. ರಾತ್ರಿ ಸಮಯದಲ್ಲಿ ಕಂಗೊಳಿಸುತ್ತಿದ್ದ ಡೆಹ್ರಾಡೂನ್ ನಗರವನ್ನು ಬೆಟ್ಟದ ಮೇಲೇರಿದಂತೆಲ್ಲಾ ಕಣ್ತುಂಬಿಕೊಳ್ಳುತ್ತಾ, ಮುಸ್ಸೂರಿ ತಲುಪಿದೆವು. ಜೀವನದ ಅತ್ಯದ್ಭುತ ಬೈಕ್ ಸವಾರಿಗಳಲ್ಲೊಂದಾಗಿತ್ತದು. ದಿನವೆಲ್ಲಾ ಬಿಸಿಲಲ್ಲಿ ಬಳಲಿ ಬೆಂಡಾಗಿದ್ದ ನಮ್ಮನ್ನು ಚುಮುಚುಮು ಚಳಿಯೊಂದಿಗೆ ಸ್ವಾಗತಿಸಿತು ಮಸ್ಸೂರಿ. ಸ್ಥಳೀಯರೊಬ್ಬರು ನಮ್ಮನ್ನು ‘ಮಾಲ್ ರೋಡ್’ ನೋಡಲು ಹೋಗಿ ಎಂದು ಕಳಿಸಿದರು. ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿ-ತಿನಿಸು ಅಂಗಡಿಗಳು, ವಸ್ತ್ರ ಹಾಗೂ ಉಡುಗೊರೆಯ ಅಂಗಡಿಗಳು - ಹೀಗೆ ಹಲವಾರು ಬಗೆಯ ಮಳಿಗೆಗಳು ಸೇರಿ ಅಲ್ಲಿ ವೈವಿಧ್ಯತೆ ಸೃಷ್ಟಿಸಿದ್ದವು. ಝಗಮಗಿಸುವ ದೀಪಗಳಿಂದ ಸಿಂಗಾರಗೊಂಡಿದ್ದ ರಸ್ತೆಯಲ್ಲಿ ಮಜವಾಗಿ ಸುತ್ತಾಡುತ್ತಾ ಭಜ್ಜಿ, ಪಾವ್ ಭಾಜಿ, ಐಸ್ ಕ್ರೀಂ ಹೀಗೆ ಬಗೆಬಗೆಯ ಖಾದ್ಯಗಳನ್ನು ಸ್ವಾಹಾ ಮಾಡಿದೆವು. ಅಲ್ಲೊಂದು ಸಿಹಿತಿನಿಸು ಅಂಗಡಿಯಲ್ಲಿ ‘ಮಟ್ಕ ದೂಧ್’(ಮಣ್ಣಿನ ಕುಡಿಕೆಯಲ್ಲಿ ಕೊಡಲ್ಪಡುವ ಬಿಸಿ ಹಾಲು) ಕುಡಿದದ್ದು ವಿಶೇಷವಾಗಿತ್ತು.
(ಮಾಲ್ ರೋಡ್, ಮಸ್ಸೂರಿ) (ಮಟ್ಕ ದೂದ್ಹ್)
ಸೂರ್ಯೋದಯ ಹಾಗು ಸೂರ್ಯಾಸ್ತ ವೀಕ್ಷಣೆಗೆ ಮಸ್ಸೂರಿ ಹೇಳಿ ಮಾಡಿಸಿದ ಜಾಗ. ಬೆಳಿಗ್ಗೆ ಬೇಗನೆ ಎದ್ದ ನಾವು, ಸೂರ್ಯೋದಯ ಕಣ್ತುಂಬಿಕೊಳ್ಳಲು ಬಹುಗುಣ ಪಾರ್ಕ್ ಕಡೆ ಹೋದೆವು. ಆಹಾ! ಅದೆಂತಹ ಮನಮೋಹಕ ನೋಟ! ಸುತ್ತಲೂ ಹಬ್ಬಿದ್ದ ಪರ್ವತಗಳ ಚಿತ್ತಾರವನ್ನು ಕಂಡು ಮೂಕವಿಸ್ಮಿತವಾದೆವು. ತಣ್ಣನೆಯ ಗಾಳಿಯಲ್ಲಿ ಬಿಸಿ ಬಿಸಿ ಮಸಾಲೆ ಟೀ ಕುಡಿಯುತ್ತಾ, ಅಲ್ಲೇ ಚಹಾದಂಗಡಿ ನಡೆಸುತ್ತಿದ್ದ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದೆವು. ಆ ಜಾಗದಿಂದ ಹೊರಡಲು ಮನಸ್ಸೇ ಆಗಲಿಲ್ಲ. ಪ್ರಕೃತಿ ಸೌಂದರ್ಯವನ್ನು ಮನದಣಿಯೆ ತುಂಬಿಕೊಂಡು, ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸುಮಾರು ಎರಡು ಗಂಟೆಗಳ ತರುವಾಯ ‘ಲಾಲ್ ಟಿಬ್ಬಾ’ ಎಂಬ ಇನ್ನೊಂದು ವೀಕ್ಷಣಾ ಸ್ಥಳಕ್ಕೆ ಹೊರಟೆವು.
(ಬಹುಗುಣ ಪಾರ್ಕ್ ನಿಂದ ಕಂಡ ಅದ್ಭುತ ದೃಶ್ಯಾವಳಿ)
(ಬಹುಗುಣ ಪಾರ್ಕ್, ಮಸ್ಸೂರಿ)
(ಕ್ಯಾಮೆಲ್ ಬ್ಯಾಕ್ ರೋಡ್, ಮಸ್ಸೂರಿ)
‘ಲಾಲ್ ಟಿಬ್ಬಾ’ಗೆ ‘ಕ್ಯಾಮೆಲ್ ಬ್ಯಾಕ್ ರೋಡ್’ ಮುಖಾಂತರ ಹೋದೆವು. (ಒಂದು ಸಣ್ಣ ಶಿಲೆಯು ಒಂಟೆಯ ಆಕಾರದಲ್ಲಿ ಇದ್ದುದ್ದರಿಂದ ಆ ರಸ್ತೆಗೆ ‘ಕ್ಯಾಮೆಲ್ ಬ್ಯಾಕ್ ರೋಡ್’ ಎಂದು ಹೆಸರು). ಆ ಶಿಲೆ ಬರಿಗಣ್ಣಿಗೆ ಸರಿಯಾಗಿ ಕಾಣುವುದಿಲ್ಲ. ದಾರಿಯಲ್ಲಿ ದೂರದರ್ಶಕದ ಸಹಾಯದಿಂದ ಒಬ್ಬರು ತೋರಿಸುತ್ತಿದ್ದರು. ಹೆಸರಿಗೆ ತಕ್ಕಂತೆ ರಸ್ತೆಯೂ ಕೂಡ ಒಂಟೆಯ ಡುಬ್ಬದಂತೆ ಏರು ತಗ್ಗಿನಿಂದ ಕೂಡಿತ್ತು. ‘ಲಾಲ್ ಟಿಬ್ಬಾ’ಗೆ ನಾವಿದ್ದ ಸ್ಥಳದಿಂದ ಇನ್ನೂ ಎತ್ತರ ಹೋಗಬೇಕಿತ್ತು. ಮೇಲೆ ಏರಿದಂತೆಲ್ಲಾ ಪ್ರಾಕೃತಿಕ ಸೌಂದರ್ಯ ಹೆಚ್ಚಾಗುತ್ತಲೇ ಹೋಗುತ್ತಿತ್ತು. ‘ಲಾಲ್ ಟಿಬ್ಬಾ’ ವೀಕ್ಷಣಾ ಸ್ಥಳದಿಂದ ಇನ್ನಷ್ಟು ಚಂದವಾಗಿ ಕಾಣತೊಡಗಿತು ಮಸ್ಸೂರಿ. ಬೆಟ್ಟಗಳನ್ನು ಮಸ್ಸೂರಿಯ ಸುತ್ತಮುತ್ತಲೂ ಯಾರೋ ಸಾಲುಸಾಲಾಗಿ ಜೋಡಿಸಿ ಇಟ್ಟಂತಿತ್ತು. ಎಷ್ಟು ದೂರ ಕಣ್ಣು ಹಾಯಿಸಿದರೂ ಬೆಟ್ಟಗಳ ಸಾಲು. ಮಸ್ಸೂರಿಯನ್ನು ‘ಪರ್ವತಗಳ ರಾಣಿ’ ಎಂದು ಕರೆಯುವುದರಲ್ಲಿ ಖಂಡಿತ ಉತ್ಪ್ರೇಕ್ಷೆಯಿಲ್ಲ. ಸಮಯದ ಅಭಾವದಿಂದ ಎಲ್ಲವನ್ನೂ ನೋಡಲು ಆಗದಿದ್ದರೂ, ಮಸ್ಸೂರಿಯು ಒಂದು ಮರೆಯಲಾಗದ ಅನುಭವ ನೀಡಿತ್ತು. ಆ ನೆನಪು ಇನ್ನೂ ಕೂಡ ಅಚ್ಚಳಿಯದೆ ಉಳಿದಿದೆ.
(ಮಸ್ಸೂರಿಯನ್ನು ಪರ್ವತಗಳ ರಾಣಿ ಎಂದು ಕರೆಯುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ)
(ಲಾಲ್ ಟಿಬ್ಬ, ಮಸ್ಸೂರಿ. ಎಡದಿಂದ : ಉದಯ್, ಲೋಕೇಶ್, ಸನತ್, ಅಜಯ್, ಶಶಾಂಕ್, ರವಿ, ಯತೀಶ)
(ಎಂಟು ಮಂದಿಯಲ್ಲಿ ಉಳಿದ ರಾಘವ, ಕೆಳಗಿನ ಫೋಟೋದಲ್ಲಿ ಎಡದಲ್ಲಿದ್ದಾನೆ)
ಮಸ್ಸೂರಿಗೆ ಮನಸೋತ ನಾವು ಮನಸ್ಸಿಲ್ಲದ ಮನಸ್ಸಿನಿಂದ ಋಷಿಕೇಶದ ಕಡೆಗೆ ವಾಪಸ್ ಹೊರಟೆವು. ಅಲ್ಲಿ ನಮ್ಮ ಬೈಕುಗಳನ್ನು ಹಿಂದಿರುಗಿಸಿ, ಹೇಮಕುಂಡ್ ಎಕ್ಸ್ ಪ್ರೆಸ್ ರೈಲಿನಲ್ಲಿ ರೂರಕೀಗೆ ಪ್ರಯಾಣ ಬೆಳೆಸಿದೆವು. ರೂರಕೀಯಲ್ಲಿ ಸ್ವಲ್ಪ ಸಮಯ ಕಳೆದು ಇನ್ನೊಂದು ರೈಲಿನಲ್ಲಿ ಪಂಜಾಬಿನ ಪಟಾಣಕೊಟ್ ಊರಿಗೆ ಪ್ರಯಾಣ ಬೆಳೆಸಿದೆವು. ಪಟಾಣಕೊಟ್ ಹಿಮಾಚಲ ಪ್ರದೇಶಕ್ಕೆ ಪ್ರವೇಶಿಸಲು ಅನುಕೂಲವಾಗಿದ್ದ ಒಂದು ಕೇಂದ್ರ. ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡದ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂಬರಲಿರುವ ಮಜದ ದಿನಗಳನ್ನು ನೆನೆಯುತ್ತಾ ಉತ್ಸಾಹಿತರಾಗಿ ಹಿಮಾಚಲ ಪ್ರದೇಶವನ್ನು ಪ್ರವೇಶಿಸಲು ಅಣಿಯಾದೆವು ಎಂಬಲ್ಲಿಗೆ ಈ ಪ್ರವಾಸ ಕಥನದ ಉತ್ತರಾಖಂಡದ ಮೊದಲನೇ ಅಧ್ಯಾಯವು ಸಮಾಪ್ತಿ. ಇದನ್ನು ಓದಿದವರಿಗೂ ಕೇಳಿದವರಿಗೂ ಗಂಗಾ ಮಾತೆಯ ಆಶೀರ್ವಾದವು ಇರಲಿ.